ಈ ಪ್ರಶ್ನೆಗೆ ಈ ಬಾರಿ ಒಂದು ಅಚ್ಚರಿಯ ಉತ್ತರ ಸಿಕ್ಕಿದೆ. ಕೆಲವು ತೆರಿಗೆದಾರರಿಗೆ ಅವರು ITR ಫೈಲ್ ಮಾಡಿದ ಅದೇ ದಿನವೇ ರೀಫಂಡ್ ಹಣ ಬಂದಿದೆ! ಇದು ಆದಾಯ ತೆರಿಗೆ ಇಲಾಖೆಯ ಡಿಜಿಟಲ್ ವ್ಯವಸ್ಥೆ ಎಷ್ಟು ವೇಗವಾಗಿದೆ ಎಂಬುದಕ್ಕೆ ಸಾಕ್ಷಿ. ಆದರೆ, ಇದು ಎಲ್ಲರಿಗೂ ಅನ್ವಯವಾಗುತ್ತದೆಯೇ? ನಿಜವಾಗಿ ರೀಫಂಡ್ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು, ಕೆಲವರಿಗೆ 24 ಗಂಟೆಯೊಳಗೆ ರೀಫಂಡ್ ಬಂದಿರುವುದು ನಿಜ. ಆದರೆ ಇದು ಒಂದು ಅಪವಾದವೇ ಹೊರತು, ಸಾಮಾನ್ಯ ನಿಯಮವಲ್ಲ ಎನ್ನುತ್ತಾರೆ ತಜ್ಞರು. ಆದಾಯ ತೆರಿಗೆ ಇಲಾಖೆಯು ಇಡೀ ಪ್ರಕ್ರಿಯೆಯನ್ನು ಸುಧಾರಿಸಿದ್ದರಿಂದ, ರೀಫಂಡ್ ಸಮಯ ಗಣನೀಯವಾಗಿ ಕಡಿಮೆಯಾಗಿದೆ.
ತೆರಿಗೆ ತಜ್ಞರ ಪ್ರಕಾರ, ನೀವು ನಿಮ್ಮ ITR ಅನ್ನು ಯಶಸ್ವಿಯಾಗಿ ಇ-ವೆರಿಫೈ (e-verify) ಮಾಡಿದ ನಂತರ, ಸರಾಸರಿ 17 ರಿಂದ 30 ದಿನಗಳೊಳಗೆ ರೀಫಂಡ್ ಹಣವನ್ನು ನಿರೀಕ್ಷಿಸಬಹುದು. ಕೆಲವು ಸಂದರ್ಭಗಳಲ್ಲಿ, ದಾಖಲೆಗಳೆಲ್ಲವೂ ಸರಿಯಾಗಿದ್ದರೆ 7 ರಿಂದ 20 ಕೆಲಸದ ದಿನಗಳಲ್ಲೇ ಹಣ ಜಮೆಯಾದ ಉದಾಹರಣೆಗಳೂ ಇವೆ.
ಒಂದು ವೇಳೆ ನಿಮ್ಮ ರೀಫಂಡ್ ಬರಲು ತಡವಾಗುತ್ತಿದ್ದರೆ, ಅದಕ್ಕೆ ಈ ಕೆಳಗಿನ ಕಾರಣಗಳಿರಬಹುದು. ಇವುಗಳನ್ನು ಸರಿಪಡಿಸಿಕೊಂಡರೆ ನಿಮ್ಮ ಹಣ ಬೇಗ ಬರುತ್ತದೆ.
ಇ-ವೆರಿಫಿಕೇಷನ್ ಮಾಡದಿರುವುದು: ಇದು ಅತ್ಯಂತ ಮುಖ್ಯವಾದ ಹಂತ. ನೀವು ITR ಫೈಲ್ ಮಾಡಿದ ನಂತರ, ಆಧಾರ್ OTP, ನೆಟ್ ಬ್ಯಾಂಕಿಂಗ್ ಅಥವಾ ಬೇರೆ ಯಾವುದೇ ವಿಧಾನದ ಮೂಲಕ 30 ದಿನಗಳೊಳಗೆ ಇ-ವೆರಿಫೈ ಮಾಡಲೇಬೇಕು. ಇದನ್ನು ಮಾಡದಿದ್ದರೆ, ನಿಮ್ಮ ರಿಟರ್ನ್ ಪ್ರಕ್ರಿಯೆಯೇ ಶುರುವಾಗುವುದಿಲ್ಲ.
ಮಾಹಿತಿಯಲ್ಲಿ ವ್ಯತ್ಯಾಸ: ನೀವು ಸಲ್ಲಿಸಿದ ITR ಮಾಹಿತಿ ಮತ್ತು ಫಾರ್ಮ್ 26AS, AIS ಅಥವಾ TIS ನಲ್ಲಿರುವ ಮಾಹಿತಿಯ ನಡುವೆ ವ್ಯತ್ಯಾಸಗಳಿದ್ದರೆ, ಅಧಿಕಾರಿಗಳು ಅದನ್ನು ಪರಿಶೀಲಿಸಲು ತಡೆಹಿಡಿಯುತ್ತಾರೆ.
ಬ್ಯಾಂಕ್ ಖಾತೆಯ ಸಮಸ್ಯೆ: ನಿಮ್ಮ ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಪೋರ್ಟಲ್ನಲ್ಲಿ ‘Pre-validate’ ಮಾಡದಿದ್ದರೆ ಅಥವಾ ನಿಮ್ಮ ಪ್ಯಾನ್ ಕಾರ್ಡ್ಗೆ ಲಿಂಕ್ ಮಾಡದಿದ್ದರೆ ರೀಫಂಡ್ ವಿಫಲವಾಗುತ್ತದೆ.
ಹಿಂದಿನ ವರ್ಷದ ಬಾಕಿ: ಹಿಂದಿನ ವರ್ಷಗಳಲ್ಲಿ ನೀವು ಇಲಾಖೆಗೆ ಪಾವತಿಸಬೇಕಾದ ಯಾವುದೇ ತೆರಿಗೆ ಬಾಕಿ ಇದ್ದರೆ, ಅದನ್ನು ರೀಫಂಡ್ ಮೊತ್ತದಲ್ಲಿ ಸರಿಹೊಂದಿಸಲಾಗುತ್ತದೆ. ಇದರಿಂದಲೂ ವಿಳಂಬವಾಗಬಹುದು.
ರೀಫಂಡ್ ಬೇಗ ಬರಲು ಏನು ಮಾಡಬೇಕು?
ಕೊನೆ ದಿನಾಂಕದೊಳಗೆ ಫೈಲ್ ಮಾಡಿ: ಗಡುವಿಗಾಗಿ ಕಾಯದೆ ಬೇಗನೆ ITR ಸಲ್ಲಿಸಿ.
ಇ-ವೆರಿಫೈ ಮರೆಯಬೇಡಿ: ಫೈಲ್ ಮಾಡಿದ ತಕ್ಷಣವೇ ಇ-ವೆರಿಫೈ ಮಾಡಿ. ರೀಫಂಡ್ ಪ್ರಕ್ರಿಯೆ ಇಲ್ಲಿಂದಲೇ ಆರಂಭ.
ಎಲ್ಲವನ್ನೂ ಕ್ರಾಸ್-ಚೆಕ್ ಮಾಡಿ: ನಿಮ್ಮ ಆದಾಯ, ಕಡಿತಗಳು ಮತ್ತು ಬ್ಯಾಂಕ್ ವಿವರಗಳನ್ನು ಫಾರ್ಮ್ 26AS ಮತ್ತು AIS ಜೊತೆ ಹೋಲಿಸಿ ನೋಡಿ.
ಬ್ಯಾಂಕ್ ಖಾತೆ ಸರಿ ಇದೆಯೇ ಪರೀಕ್ಷಿಸಿ: ಇ-ಫೈಲಿಂಗ್ ಪೋರ್ಟಲ್ನಲ್ಲಿ ನಿಮ್ಮ ಬ್ಯಾಂಕ್ ಖಾತೆ ‘Validated’ ಮತ್ತು ‘PAN linked’ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
September 10, 2025 11:11 AM IST