ಎರಡು ದಿನಗಳ ಹಿಂದೆ ಉದ್ಯಮಿ ಓರ್ವ ಯುವಕನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಿಜಕ್ಕೂ ಅನೇಕರಿಗೆ ಸ್ಪೂರ್ತಿಯಾಗಿದೆ.
ಆನಂದ್ ಮಹೀಂದ್ರಾ ಅವರು, ಐಎಎಸ್ ತರಬೇತಿ ಪಡೆಯುತ್ತಿರುವ ದಿನಗೂಲಿ ಕಾರ್ಮಿಕನ ಮಗ ಹೇಮಂತ್ ಅವರ ಕಥೆಯನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿ ಕಲೆಕ್ಟರ್ ಆಗಲು ನಿರ್ಧರಿಸಿದ ಯುವಕನ ಯಶಸ್ಸನ್ನು ಇಲ್ಲಿ ಅವರು ಶ್ಲಾಘಿಸಿದದ್ದಾರೆ. X ವೇದಿಕೆಯಲ್ಲಿ ಹೇಮಂತ್ ಅವರ ಕಥೆಯನ್ನು ರೀ ಪೋಸ್ಟ್ ಮಾಡಿದ ಇವರು, ಅದರೊಟ್ಟಿಗೆ ಒಂದೊಳ್ಳೆ ಸಾಲುಗಳನ್ನು ಸಹ ಬರೆದಿದ್ದಾರೆ.
“ನಿಮ್ಮನ್ನು ಅವಮಾನಿಸಿದಾಗ ಅಥವಾ ಮನನೊಂದಾಗ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಇದರ ಬದಲು ಮುಂದೆ ಹೇಗೆ ಬರೋದು ಅನ್ನೋದಕ್ಕೆ ಸಮಯ ಕೊಡಿ. ನಿಮ್ಮನ್ನು ಜಡ್ಜ್ ಮಾಡಿದವರಿಗೆ ನಿಮ್ಮ ಸಾಧನೆ ಮೂಲಕ ಉತ್ತರ ಕೊಡಬೇಕು. ಇದೇ ಸರಿಯಾದ ಪ್ರತಿಕ್ರಿಯೆ” ಅಂತಾ ಬರೆದುಕೊಂಡಿದ್ದಾರೆ.
ಐಎಎಸ್ ಅಧಿಕಾರಿಯಾಗಿ ಟ್ರೈನಿಂಗ್ ಪಡೆಯುತ್ತಿರುವ ಹೇಮಂತ್ ಪರೀಕ್ ಬಡತನದಲ್ಲಿಯೇ ಬೆಳೆದು ಈ ದೊಡ್ಡ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಗೆ ಕಾರಣವಾಗಿದ್ದು, ಅವರ ಜೀವನದಲ್ಲಿ ನಡೆದ ಆ ಒಂದು ಅವಮಾನದ ಘಟನೆ. ಹೌದು, ಇವರ ತಾಯಿ ದಿನಗೂಲಿ ಮಾಡುತ್ತಿದ್ದರು, ಕೆಲಸಕ್ಕೆ ₹200 ನೀಡಲಾಗುತ್ತಿತ್ತು. ಆದರೆ ಈ ಸಂಬಳದಲ್ಲೂ ಅಲ್ಪ ಸ್ವಲ್ಪ ಕಟ್ ಮಾಡಿಕೊಂಡು ನಂತರ ಉಳಿದ ಹಣವನ್ನು ಅವರ ತಾಯಿಗೆ ಮೇಲಿನವರು ನೀಡುತ್ತಿದ್ದರು.
ಇದನ್ನು ಕೇಳಲು ಹೇಮಂತ್ ಗುತ್ತಿಗೆದಾರರ ಬಳಿ ಹೋದಾಗ ಅಲ್ಲಿ ಅವರನ್ನು ಅಪಹಾಸ್ಯ ಮಾಡಿ ತುಂಬಾ ಕೀಳಾಗಿ ನೋಡಲಾಯಿತು. ಅಲ್ಲದೇ ನೀನೇನು ದೊಡ್ಡ ಕಲೆಕ್ಟರ್ ಅಂತಾನೂ ಟೀಕಿಸಿ ಮಾತನಾಡಿದ್ದರು.
ಈ ಅವಮಾನವನ್ನೇ ಪ್ರೇರಣೆಯಾಗಿ ಪಡೆದ ಇವರು ಕಲೆಕ್ಟರ್ ಆಗಲು ನಿರ್ಧರಿಸಿದರು. ಒಂದು ಕಾಲದಲ್ಲಿ ಒಂದು ಉದ್ಯೋಗ ಸಿಕ್ಕರೆ ಸಾಕು ಎಂದುಕೊಂಡಿದ್ದ ಹೇಮಂತ್ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಯುಪಿಎಸ್‌ಸಿ ನಾಗರಿಕ ಸೇವೆಗಳ ಮೇಲೆ ದೃಷ್ಟಿ ನೆಟ್ಟರು.
ಜೇಬಿನಲ್ಲಿ ಕೇವಲ ₹1,400 ಇಟ್ಟುಕೊಂಡು ದೆಹಲಿಗೆ ಹೊರಟರು. ಹಣವಿಲ್ಲ, ಮಾರ್ಗದರ್ಶನವಿಲ್ಲದೇ, ಕೇವಲ ದೃಢನಿಶ್ಚಯದೊಂದಿಗೆ ದೆಹಲಿ ತಲುಪಿದ ಇವರಿಗೆ ಅಪರಿಚಿತರು ಆಶ್ರಯ ಮತ್ತು ಅಧ್ಯಯನ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿದ್ದರು.
ಪರಿಸ್ಥಿತಿಗಳಿಗೆ ಎದೆಗುಂದದ ಹೇಮಂತ್ ಪಟ್ಟುಬಿಡದೆ ಅಧ್ಯಯನ ಮಾಡಿದರು. ಏಪ್ರಿಲ್ 16, 2023 ರಂದು ಬಿಡುಗಡೆಯಾದ, ಯುಪಿಎಸ್‌ಸಿ ಫಲಿತಾಂಶದಲ್ಲಿ ಹೇಮಂತ್ ಅವರು 884 AIR ಅನ್ನು ಪಡೆದರು. ಒಂದು ಕಾಲದಲ್ಲಿ ಅವಮಾನಕ್ಕೊಳಗಾದ ಈ ಯುವಕ ಪ್ರಸ್ತುತ ಐಎಎಸ್ ಅಧಿಕಾರಿಯಾಗಲು LBSNAA (ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ) ಯಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಯಾರೆಲ್ಲಾ ಅಂದು ಅವಮಾನ ಮಾಡಿದ್ದರೋ, ಅವರೇ ಇಂದು ಇವರನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದಾರೆ.
ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಯಶಸ್ಸಿನ ತಿರುಗೇಟು ಕೊಟ್ಟ ಹೇಮಂತ್ ಕಥೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅವಮಾನಗಳ ಬಗ್ಗೆ ಚಿಂತಿಸುವ ಬದಲು ಬೆಳವಣಿಗೆಯ ಮೇಲೆ ಗಮನ ಹರಿಸಬೇಕು ಎಂದು ಕಾಮೆಂಟ್‌ನಲ್ಲಿ ತಿಳಿಸಿದರು.
March 22, 2025 4:10 PM IST