Last Updated:
ಭಾರತದ ಹೋಮ್ ಇಂಟಿರಿಯರ್ಸ್ ಮಾರ್ಕೆಟ್ 2030ರ ವೇಳೆಗೆ 24.5 ಶತಕೋಟಿ ಡಾಲರ್‌ಗೆ ತಲುಪಲಿದೆ, ದೆಹಲಿ NCR, ಬೆಂಗಳೂರು, ಹೈದರಾಬಾದ್ ಮುಂಚೂಣಿಯಲ್ಲಿದೆ.
ನಿಮ್ಮ ಮನೆ (Home) ಸುಂದರವಾಗಿ ಕಾಣಬೇಕಾ? ಹೌದು ಅಂತಿದ್ರೆ, ನಿಮಗೊಂದು ಗುಡ್ ನ್ಯೂಸ್ (Good News) ಇಲ್ಲಿದೆ. ಭಾರತದಲ್ಲಿ ಮನೆಗಳ ಒಳಾಂಗಣ ವಿನ್ಯಾಸ ಮಾರುಕಟ್ಟೆ (Market) ಈಗ ಸಿಕ್ಕಾಪಟ್ಟೆ ಬೆಳೆಯುತ್ತಿದೆ. ಈಗಂತೂ ಜನರಿಗೆ ಬರೀ ಮನೆ ಇದ್ದರೆ ಸಾಲದು, ಅದು ತಮ್ಮ ಟೇಸ್ಟ್, ತಮ್ಮ ಜೀವನಶೈಲಿಗೆ (Life Style) ತಕ್ಕಂತೆ ಇರಬೇಕು ಅಂತ ಆಸೆ ಪಡ್ತಾರೆ. ಭಾರತದಲ್ಲಿ ಗೃಹ ವಿನ್ಯಾಸ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಹೆಚ್ಚುತ್ತಿರುವ ಆದಾಯ ಮತ್ತು ವೈಯಕ್ತಿಕಗೊಳಿಸಿದ, ಕ್ರಿಯಾತ್ಮಕ ಮನೆಗಳ ಆಸಕ್ತಿಯೇ ಇದಕ್ಕೆ ಕಾರಣ. ಈ ಒಂದು ಕ್ಷೇತ್ರವು 2030ರ ವೇಳೆಗೆ 24.5 ಶತಕೋಟಿ ಡಾಲರ್‌ಗೆ ತಲುಪುವ ನಿರೀಕ್ಷೆಯಿದ್ದು, ಇದು ಮನೆ ಅಲಂಕಾರ ಮತ್ತು ವಿನ್ಯಾಸದ ಹೊಸ ಯುಗವನ್ನು ಸೂಚಿಸುತ್ತದೆ.
ಭಾರತದ ಗೃಹ ವಿನ್ಯಾಸ ಮಾರುಕಟ್ಟೆ(ಹೋಮ್ ಇಂಟಿರಿಯರ್ಸ್ ಮಾರ್ಕೆಟ್) ಮುಂದಿನ ಐದು ವರ್ಷಗಳಲ್ಲಿ ತನ್ನ ಬೆಳವಣಿಗೆಯ ವೇಗವನ್ನು ದ್ವಿಗುಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುತ್ತಿರುವ ಆದಾಯ ಮತ್ತು ವೈಯಕ್ತಿಕ ಹಾಗೂ ಕ್ರಿಯೇಟಿವ್ ವಾಸದ ಸ್ಥಳಗಳ ಮೇಲಿನ ಆಸಕ್ತಿಯಿಂದ ಉತ್ತೇಜಿತವಾಗಿರುವ ಈ ಮಾರುಕಟ್ಟೆ, 2030ರ ವೇಳೆಗೆ 24.5 ಶತಕೋಟಿ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಆನ್‌ಲೈನ್ ರಿಯಲ್ ಎಸ್ಟೇಟ್ ವೇದಿಕೆ ಮ್ಯಾಜಿಕ್‌ಬ್ರಿಕ್ಸ್‌ನ ಅಧ್ಯಯನವು ತೋರಿಸಿದೆ.
ಭಾರತದಾದ್ಯಂತ ಮನೆಗಳ ಒಳಾಂಗಣ ವಿನ್ಯಾಸಕ್ಕಾಗಿ ಸರಾಸರಿ ಪ್ರತಿ ಚದರ ಅಡಿಗೆ 560 ರೂ. ಖರ್ಚು ಮಾಡಲಾಗುತ್ತದೆ. ದೆಹಲಿ ಎನ್‌ಸಿಆರ್ ಪ್ರದೇಶವು ಪ್ರತಿ ಚದರ ಅಡಿಗೆ ಸರಾಸರಿ 580 ರೂ. ಖರ್ಚು ಮಾಡುವ ಮೂಲಕ ಮುಂಚೂಣಿಯಲ್ಲಿದೆ. ನಂತರ ಬೆಂಗಳೂರು (520 ರೂ. ಪ್ರತಿ ಚದರ ಅಡಿ) ಮತ್ತು ಹೈದರಾಬಾದ್ (490 ರೂ. ಪ್ರತಿ ಚದರ ಅಡಿ) ಇವೆ.
ಗ್ರಾಹಕರು ತಮ್ಮ ಹೂಡಿಕೆಯ ದೊಡ್ಡ ಪಾಲನ್ನು ಮಲಗುವ ಕೋಣೆಗಳು (ಬೆಡ್‌ರೂಮ್‌ಗಳು) ಮತ್ತು ಅಡುಗೆಮನೆಗಳ (ಕಿಚನ್) ವಿನ್ಯಾಸಕ್ಕಾಗಿ ಮೀಸಲಿಡುತ್ತಾರೆ. ಒಟ್ಟಾರೆ ಗೃಹ ವಿನ್ಯಾಸ ವೆಚ್ಚದಲ್ಲಿ ಅರ್ಧಕ್ಕಿಂತ ಹೆಚ್ಚು ಈ ಎರಡು ವಿಭಾಗಗಳಿಗೆ ಸೇರಿಕೊಳ್ಳುತ್ತದೆ.
ಕೇವಲ ಪ್ರತ್ಯೇಕ ಕೊಠಡಿಗಳನ್ನು ವಿನ್ಯಾಸಗೊಳಿಸುವುದಕ್ಕಿಂತ ಹೆಚ್ಚಾಗಿ, ಸಂಪೂರ್ಣ ಮನೆ ವಿನ್ಯಾಸ (ಪುಲ್ ಹೋಮ್ ಡಿಸೈನ್) ಪರಿಹಾರಗಳನ್ನು ಆಯ್ಕೆ ಮಾಡುವ ಪ್ರವೃತ್ತಿ ಗ್ರಾಹಕರಲ್ಲಿ ಹೆಚ್ಚುತ್ತಿದೆ. ವೈಯಕ್ತಿಕ ಅಭಿರುಚಿಗೆ ಅನುಗುಣವಾಗಿ, ಮನೆಯ ಪ್ರತಿಯೊಂದು ಮೂಲೆಗೂ ಅನನ್ಯ ಸ್ಪರ್ಶ ನೀಡಲು ಗ್ರಾಹಕರು ಬಯಸುತ್ತಿದ್ದಾರೆ.
ಆಧುನಿಕ ಸೌಲಭ್ಯಗಳು, ಸುಂದರ ವಿನ್ಯಾಸ ಮತ್ತು ಸ್ಥಳದ ಗರಿಷ್ಠ ಬಳಕೆಗೆ ಒತ್ತು ನೀಡುತ್ತಿರುವುದು ಈ ಪ್ರವೃತ್ತಿಗೆ ಕಾರಣವಾಗಿದೆ. ನಗರಗಳತ್ತ ಜನರ ವಲಸೆ, ಸಣ್ಣ ಕುಟುಂಬಗಳ ಹೆಚ್ಚಳ ಮತ್ತು ವೃತ್ತಿಪರರ ಸಂಖ್ಯೆಯಲ್ಲಿನ ಏರಿಕೆ ಗೃಹ ವಿನ್ಯಾಸ ಮಾರುಕಟ್ಟೆಗೆ ಹೊಸ ಉತ್ತೇಜನ ನೀಡಿದೆ. ಮನೆ ಕೇವಲ ವಾಸಿಸುವ ಸ್ಥಳವಲ್ಲದೆ, ವ್ಯಕ್ತಿತ್ವ ಮತ್ತು ಜೀವನಶೈಲಿಯ ಪ್ರತಿಬಿಂಬವಾಗಿದೆ ಎಂಬ ಕಲ್ಪನೆ ಗ್ರಾಹಕರಲ್ಲಿ ಬಲವಾಗುತ್ತಿದೆ.
ಇದು ಗೃಹ ವಿನ್ಯಾಸ ತಜ್ಞರು ಮತ್ತು ಸಂಸ್ಥೆಗಳಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ಭಾರತದ ಆಂತರಿಕ ವಿನ್ಯಾಸ ಮಾರುಕಟ್ಟೆಯ ಭವಿಷ್ಯ ಉಜ್ವಲವಾಗಿದೆ.
September 10, 2025 3:41 PM IST